ಕೃಷ್ಣಸ್ವಾಮಿ ಅಯ್ಯಂಗಾರ್, ಎಚ್ ಎಸ್
(1920- ) : ಎಚ್ಚೆಸ್ಕೆ ಎಂದೇ ಪ್ರಸಿದ್ಧರಾಗಿರುವ ಎಚ್ ಎಸ್ ಕೃಷ್ಣಸ್ವಾಮಿ ಅಯ್ಯಂಗಾರ್ 26 ಆಗಸ್ಟ್ 1920ರಂದು ಕೆ.ಆರ್.ನಗರ ಜಿಲ್ಲೆಯ ಹಳಿಯೂರಿನಲ್ಲಿ ಜನಿಸಿದರು. ತಂದೆ ಶ್ರೀನಿವಾಸ ಅಯ್ಯಂಗಾರ್ಯರ್.  ತಾಯಿ ಶ್ರೀಮತಿ ಅಲಮೇಲಮ್ಮ.

ಹಳಿಯೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ಮಾಧ್ಯಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿದೆಶೆ. 1935ರಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮುಗಿಯತ್ತಿದ್ದಂತೆಯೇ ತಾಯಿನಾಡು ಹಿಂದೂ ಪತ್ರಿಕೆಗಳಿಗೆ ಅತಿ ಕಿರಿಯ ಬಾತ್ಮೀದಾರ. ಮಿರ್ಜಾ ಇಸ್ಮಾಯಿಲರು ದಿವಾನರಾಗಿದ್ದ ಕಾಲ. ಒಂದು ಸಭೆಯಲ್ಲಿ ಪತ್ರಿಕಾಪ್ರತಿನಿಧಿಗಳ ಸಾಲಿನಲ್ಲಿ ಎಚ್ಚೆಸ್ಕೆ ಕುಳಿತಿದ್ದರು. ಅವರನ್ನು ನೋಡಿ ಮಿರ್ಜಾ ಕುತುಹಲದಿಂದ ವಿಚಾರಿಸಿ "ಆ ದೊಡ್ಡ ಪತ್ರಿಕೆಗೆ ಈ ಚೋಟುದ್ದದ ಹುಡುಗ ಪ್ರತಿನಿಧಿಯೆ?" ಎಂದು ತಮಾಷೆ ಮಾಡಿದರಂತೆ.

	1940ರಲ್ಲಿ ಎಚ್ಚೆಸ್ಕೆ  ಬೆಂಗಳೂರಿಗೆ ಬಂದರು. ಸ್ವಾತಂತ್ರ್ಯ ಚಳುವಳಿಯ ಆದಿನಗಳಲ್ಲಿ ಅದರಲ್ಲಿ ಪಾಲ್ಗೊಳ್ಳುತ್ತಲೇ ಎಚ್ಚೆಸ್ಕೆ  ಪತ್ರಕರ್ತರಾಗಿಯೂ ಸೇವೆ ಸಲ್ಲಿಸಿದರು. ಆ ಸಮಯದಲ್ಲಿ ಕಾಲೇಜಿನಲ್ಲಿ ಇದ್ದ  ಎಲ್ ಕಾಂ ಪರೀಕ್ಷೆಯನ್ನು ಪ್ರಥಮದರ್ಜೆಯಲ್ಲಿ ಪಾಸು ಮಾಡಿದರು. ತರಗತಿಗಳಲ್ಲಿ ಸಂಸ್ಕøತವನ್ನು ಓದಿದರೂ, ಕನ್ನಡದ ಮೇಲೆ ಪ್ರೀತಿ, ಅಭಿಮಾನ, ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಿದ್ದ `ಕನ್ನಡ ಜಾಣ' ಪರೀಕ್ಷೆಗೂ ಕಟ್ಟಿ ತೇರ್ಗಡೆಯಾದರು. ಬಿ ಎಂ ಶ್ರೀಕಂಠಯ್ಯನವರ ಸಮ್ಮುಖದಲ್ಲಿ ತಮ್ಮ ಒಂದು ಪ್ರಬಂಧವನ್ನು ಓದುವ ಸದವಕಾಶ ಎಚ್ಚೆಸ್ಕೆಯವರಿಗೆ ಲಭಿಸಿತು. ಅತೃಪ್ತಿಯೇ ಪ್ರಗತಿಯ ಮೂಲ ಎಂದು ಆ ಪ್ರಬಂಧದಲ್ಲಿ ಪ್ರತಿಪಾದಿಸಲಾಗಿತ್ತು. ಶ್ರೀಕಂಠಯ್ಯನವರು ಆ ಪ್ರಬಂಧವನ್ನು ಮೆಚ್ಚಿ ಎಚ್ಚೆಸ್ಕೆ ಅವರ ಬೆನ್ನು ತಡವಿ "ಕನ್ನಡ ಸಾಹಿತ್ಯದಲ್ಲಿ ನೀನು ಹೆಚ್ಚಿನದನ್ನು ಸಾಧಿಸಬೇಕು" ಎಂದು ಹುರಿದುಂಬಿಕೆಯ ಮಾತನ್ನಾಡಿದರು. ಎಚ್ಚೆಸ್ಕೆ ಅದನ್ನು ಎಂದೂ ಮರೆಯಲಿಲ್ಲ. ನಂತರ ಬಿಕಾಂ ಪದವಿಗೆ ಸೇರಿ ಮೊದಲ ಸ್ಥಾನದಲ್ಲಿ ತೇರ್ಗಡೆಯಾದರು. ಈ ಸಮಯದಲ್ಲಿ ನಿರಂಜನ, ವೈಎನ್‍ಕೆ, ಟಿಎಸ್‍ಆರ್ ಮುಂತಾದ ಖ್ಯಾತ ಪತ್ರಕರ್ತರ ಪರಿಚಯವಾಯಿತು. ಎಚ್ಚೆಸ್ಕೆ ಒಂದೇ ಸಮನೆ ಬರೆದರು. ಅಸ್ಖಲಿತ ಸುಂದರ ಕೈಬರಹ.  ಎಚ್ಚೆಸ್ಕೆಯವರದು ಪತ್ರಿಕಾವೃತ್ತಿಯಲ್ಲೂ  ಪ್ರಥಮದರ್ಜೆ. ಆದರೆ ಅವರು ವಾಣಿಜ್ಯ ಶಾಸ್ತ್ರದಲ್ಲಿ ಹೆಚ್ಚಿನ ಕೆಲಸ ಮಾಡಬೇಕಾಗಿತ್ತೇನೋ ಎನ್ನುವ ಹಾಗೆ ಅವರು ಬನಾರಸ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರದ ಎಂಎ ಪರೀಕ್ಷೆಯಲ್ಲಿ  ಮೊದಲ ಸ್ಥಾನದೊಂದಿಗೇ ತೇರ್ಗಡೆಯಾದರು. ಅಲ್ಲಿಂದಾಚೆಗೆ ಅವರು ಬನುಮಯ್ಯ ಕಾಲೇಜಿನಲ್ಲಿ ಅಧ್ಯಾಪಕರಾದರು. ಬೋಧನೆಯಲ್ಲಿಯೂ ಪ್ರಥಮದರ್ಜೆಯನ್ನು ಸಾಧಿಸಿದರು. ಸಾವಿರಾರು ವಿದ್ಯಾರ್ಥಿಗಳ ಪ್ರೀತಿಯನ್ನು ಅಭಿಮಾನವನ್ನು ಸಂಪಾದಿಸಿದರು. ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳಿಗೂ ಕಡೆಯ ಹದಿನೈದು ನಿಮಿಷ ಕನ್ನಡದಲ್ಲಿ ಸಾರಾಂಶವನ್ನು ಬೋಧಿಸುತ್ತಿದ್ದರು. ಈ ಕುರಿತು ಅವರು ಕನ್ನಡದಲ್ಲಿ ವಿಷಯ ನಿರೂಪಣೆ ಮಾಡುವಾಗ  ವಿದ್ಯಾರ್ಥಿಗಳ ಕಣ್ಣುಗಳಲ್ಲಿ ಕಾಂತಿ ತುಂಬಿಕೊಳ್ಳುತ್ತಿತ್ತು ಎಂದು ನೆನಪಿಸಿಕೊಳ್ಳುತ್ತಾರೆ. ಬೋಧನೆಯ ಜೊತೆಜೊತೆಗೇ ಬರಹದಲ್ಲಿಯೂ ಎಚ್ಚೆಸ್ಕೆ ತೊಡಗಿಕೊಂಡರು. ವಾಣಿಜ್ಯ ಶಾಸ್ತ್ರದ ಬಗೆಗೆ ಆಗ ಕನ್ನಡದ ಪುಸ್ತಕಗಳೇ ಇರಲಿಲ್ಲ. ಎಚ್ಚೆಸ್ಕೆ ವ್ಯಾವಹಾರಿಕ ಕನ್ನಡ ವಾಣಿಜ್ಯ ಶಾಸ್ತ್ರ ಪರಿಚಯ (ಎರಡು ಸಂಪುಟಗಳು) ಕೃತಿಗಳನ್ನು ನೀಡಿದರು. ಅವು ವಿದ್ಯಾರ್ಥಿಗಳಿಗೆ ಬಹಳ ಆಪ್ತ ಸಹಚರಿಗಳಾದವು. ಎಚ್ಚೆಸ್ಕೆ ಬಹುಶ್ರುತರು. ಬರವಣಿಗೆಯಲ್ಲಿ ವಿಶೇಷ ಶೈಲಿಯನ್ನು ರೂಢಿಸಿಕೊಂಡಿರುವವರು. ಕ್ರಿಯಾಪದಗಳಿಲ್ಲದೆಯೇ ವಾಕ್ಯ ರಚನೆ ಮಾಡುವುದರಲ್ಲಿ ಸಿದ್ಧಹಸ್ತರು. ಎರಡು ಮೂರು ಪದಗಳಲ್ಲಿ ಒಂದು ವಾಕ್ಯವನ್ನು ಕಟ್ಟಿಬಿಡುತ್ತಾರೆ. ಸುಧಾ ಪ್ರಜಾವಾಣಿಗಳಲ್ಲಿ ಎಚ್ಚಸ್ಕೆಯವರ ಅಂಕಣಗಳು ಅತ್ಯಂತ ಜನಪ್ರಿಯವಾದವು. ವಾರದ ವ್ಯಕ್ತಿ, ವ್ಯಕ್ತಿ ವಿಶೇಷ, ವಾರದಿಂದ ವಾರಕ್ಕೆ, ಆರ್ಥಿಕ ಚಿಂತನೆ ಇಂತಹ ಅಂಕಣಗಳಲ್ಲಿ ಕೆಲವು. ಸಮದರ್ಶಿ, ವಿಚಾರಪ್ರಿಯ ಮುಂತಾದ ಹೆಸರುಗಳಲ್ಲಿ ಅವರು ಈ ಅಂಕಣಗಳನ್ನು ಬರೆಯುತ್ತಿದ್ದರು. ನಿಯತವಾಗಿ ಅವರಷ್ಟು ದೀರ್ಘಕಾಲ ಅಂಕಣಗಳನ್ನು ಬರೆದವರು ಬೇರೊಬ್ಬರಿಲ್ಲ. ಪತ್ರಿಕಾ ಅಂಕಣಗಳ ಜೊತೆಗೇ ಲಲಿತ ಪ್ರಬಂಧಗಳನ್ನು ಬರೆದರು. ಕಳ್ಳಹೊಕ್ಕ ಮನೆ, ಚಂದ್ರಕಾಂತಿ, ಸುರಹೊನ್ನೆ, ಮೇಘಲಹರಿ ಮುಂತಾದವು ಅವರ ಮುಖ್ಯ ಪ್ರಬಂಧ ಸಂಕಲನಗಳಲ್ಲಿ ಕೆಲವು. ಎಚ್ಚೆಸ್ಕೆ ಕಾದಂಬರಿಗಳನ್ನೂ ಬರೆದರು. "ಬಯಕೆಯ ಬೆಲೆ" ಮುಖ್ಯವಾದ ಕಾದಂಬರಿಗಳಲ್ಲಿ ಒಂದು. ಅನೇಕ ಜೀವನಚರಿತ್ರೆಗಳನ್ನು  ಎಚ್ಚೆಸ್ಕೆ ರಚಿಸಿದರು. ಅವುಗಳಲ್ಲಿ ಶ್ರೀ ರಾಮಾನುಜಾಚಾರ್ಯರು, ವಿ ಕೆ ಆರ್ ವಿ ರಾವ್, ಲಾಲ್‍ಬಹದ್ದೂರ್ ಶಾಸ್ತ್ರೀ, ಬಿ ಆರ್ ಅಂಬೇಡ್ಕರ್ ಜಯಪ್ರಕಾಶನಾರಾಣ, ಯಾಮುನಾಚಾರ್ಯರು ಇವು ಮುಖ್ಯವಾದವು. ಅವರ ಅಂಕಣ ಬರಹಗಳಿಂದ ಆಯ್ದ ಸಾವಿರಾರು ಲೇಖನಗಳನ್ನು ಬದುಕು-ಬೆಳಕು, ಮಾನ್ಯರು- ಅಸಾಮಾನ್ಯರು, ಗಗನಚುಕ್ಕಿ- ಭರಚುಕ್ಕಿ, ಹೊನ್ನ ಬಿತ್ತಿ ಬೆಳೆದವರು ಮುಂತಾದ ಕೃತಿಗಳಲ್ಲಿ ಪ್ರಕಟಿಸಿದ್ದಾರೆ. ಎಚ್ಚೆಸ್ಕೆಯವರು  ಅಂಕಣಬರಹಗಳಲ್ಲದೇ ಬಿಡಿಲೇಖನಗಳನ್ನು ಬರೆದಿದ್ದಾರೆ. ಇವು ಅವರ ಆಯ್ದ ಬರಹಗಳು ಎಂಬ ಸಂಭಾವನಾ ಗ್ರಂಥದಲ್ಲಿ  ಇವೆ. ನವ್ಯಕಾವ್ಯದಿಂದ ರಾಜಕೀಯದ ವರೆಗೆ ಈ ಲೇಖನಗಳು ಚಾಚಿಕೊಂಡಿವೆ. ಅವರ ಅನೇಕ ಕವನ ಸಂಕಲನಗಳು ನಂತರ ಪ್ರಕಟವಾದವು. ಇವುಗಳಲ್ಲಿ ದವನದ ಕೊನೆ, ತಿಂಗಳೂರಿನ ತೇರು ಬಹುಮುಖ್ಯವಾಗಿವೆ.  ಎಚ್ಚೆಸ್ಕೆಯವರು ಅನೇಕ ಗ್ರಂಥಗಳನ್ನು ಸಂಪಾದಿಸಿದರು. ಅವಲೋಕನ ಕರ್ನಾಟಕ ಪರಂಪರೆಯ ಸಮೀಕ್ಷೆ, ದಾಸ ಸಾಹಿತ್ಯ ದರ್ಶನ, ಗಾಂಧೀಜಿ ಒಂದು ಪುನರ್ದರ್ಶನ, ಬಾನುಲಿ ಬರವಣಿಗೆ, ಕನ್ನಡದಲ್ಲಿ ವಿಡಂಬನ ಸಾಹಿತ್ಯ, ನಮ್ಮ ಅಭಿವೃದ್ಧಿ ಯೋಜನೆಗಳು ಇವೆ ಮುಖ್ಯವಾದ ಕೃತಿಗಳಲ್ಲಿ ಕೆಲವು. 

ಇಷ್ಟಲ್ಲದೆ, ಎಚ್ಚೆಸ್ಕೆ ಆಡಳಿತ ಕನ್ನಡ, ಭಾರತದ ಭಾಷಾ ಸಮಸ್ಯೆ, ಪ್ರಜಾಪ್ರಭುತ್ವ, ಬ್ಯಾಂಕಿಂಗ್ ಹೆಜ್ಜೆಗುರುತುಗಳು ನಮ್ಮ ಅಭಿವೃದ್ಧಿ ಯೋಜನೆಗಳು, ನಮ್ಮ ಶರೀರದ ರಚನೆ ಮುಂತಾದ ಸಂಕೀರ್ಣ ಕೃತಿಗಳನ್ನು ರಚಿಸಿದರು. ಪತ್ರಿಕಾ ಅಂಕಣಗಳನ್ನು ಎಚ್ಚೆಸ್ಕೆ ಮುಂದುವರಿಸಿಯೇ ಇದ್ದಾರೆ. ಮೈಸೂರು ಮಿತ್ರ, ಕರ್ಮವೀರ, ತರಂಗ ಮೊದಲಾದ ಅನೇಕ ಪತ್ರಿಕೆಗಳಲ್ಲಿ ಅವರ ಅಂಕಣಗಳು ಪ್ರಕಟವಾಗುತ್ತಿವೆ. ಇಂಗ್ಲಿಷಿನಲ್ಲಿಯೂ ಎಚ್ಚೆಸ್ಕೆ ಬರೆದಿದ್ದಾರೆ. 

ಎಚ್ಚೆಸ್ಕೆ ಬನುಮಯ್ಯ ಕಾಲೇಜಿನಿಂದ ತಾತ್ವಿಕ ಭಿನ್ನಾಭಿಪ್ರಾಯದ ಕಾರಣದಿಂದ ನಿವೃತ್ತರಾಗಬೇಕಾಯಿತು. ಆದರೆ ಅವರು ಕೂಡಲೇ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ವಿಶ್ವಕೋಶದ ಮಾನವಿಕ ವಿಭಾಗದ ಸಂಪಾದಕರಾಗಿ ನೇಮಕಗೊಂಡರು. ಅವಿರತವಾಗಿ ಅದಕ್ಕೆ ದುಡಿದರು. 1980ರ ಸಮಯದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕಿನ ಕರ್ನಾಟಕದ ಶಾಖೆಗಳಲ್ಲಿದ್ದ ಕನ್ನಡ ಸಂಘಗಳ ಸಮನ್ವಯಸಮಿತಿಯ ಉತ್ಸಾಹಿಗಳು ಹೊರತರಬಯಸಿದ ಬ್ಯಾಂಕಿಂಗ್ ಪ್ರಪಂಚ ಪತ್ರಿಕೆಯ ಸಂಪಾದಕತ್ವದ ಹೊಣೆಯನ್ನು ಹೊರಬೇಕೆಂದು ಕೋರಿದರು. ಎಚ್ಚೆಸ್ಕೆ ಉತ್ಸಾಹವನ್ನೇನೋ ಮೆಚ್ಚಿದರು. ಆದರೆ ಲೇಖಕರ ಅಭಾವವನ್ನು ಮುಂದಿಟ್ಟು ಒಂದು ಸಲಹೆ ನೀಡಿದರು. ನಿಯತವಾಗಿ ಉತ್ಸಾಹಿಗಳು ಲೇಖನಗಳನ್ನು ಬರೆದು ತಂದು ಅವನ್ನು ಒಟ್ಟಿಗೆ ಚರ್ಚಿಸಿ ನಂತರ ಅವುಗಳನ್ನು ತಿದ್ದಿ ಪ್ರಕಟಣೆಗೆ ಸಿದ್ಧಪಡಿಸಬೇಕು. ಇದಕ್ಕೆ ಎದುರು ಕಕ್ಷಿಗಳು ಒಪ್ಪಿದರು. ಈ ಚರ್ಚೆಗೆ ಬ್ಯಾಂಕಿಂಗ್ ಕಮ್ಮಟ ಎಂದು ನಾಮಕರಣವಾಯಿತು. ಪ್ರತಿ ಬ್ಯಾಂಕಿಂಗ್ ಕಮ್ಮಟವೂ  ನಾಲ್ಕರಿಂದ ಏಳು ದಿನಗಳ ಕಾಲ ಅವಧಿಯಲ್ಲಿü ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ನಡೆದವು. ಸೊಲ್ಲಾಪುರ, ಕಾಸರಗೋಡುಗಳಂತಹ ಗಡಿನಾಡು ಪ್ರದೇಶಗಳಲ್ಲಿಯೂ ಇವು ನಡೆದವು. ಬ್ಯಾಂಕಿಂಗ್ ಲೇಖಕರ ಒಂದು ಪಡೆಯೇ ಇದರಿಂದ ಸೃಷ್ಟಿಯಾಯಿತು.  ಮೈಸೂರಿನಲ್ಲಿ ನಡೆದ ಇಪ್ಪತ್ತೈದನೆಯ ಕಮ್ಮಟ ಅನೇಕ ರೀತಿಯಲ್ಲಿ ಸ್ಮರಣೀಯವಾಯಿತು. ಇದು ಎಚ್ಚೆಸ್ಕೆಯವರ ವಿಶಿಷ್ಟ ಕೊಡುಗೆ. ಈ ಅವಧಿಯಲ್ಲಿ ಅವರು ಸಮನ್ವಯ ಸಮಿತಿ ಹೊರತಂದ ಬ್ಯಾಂಕಿಂಗ್ ನಿಘಂಟನ್ನು ಸಂಪಾದಿಸಿದರು. 

1981ರಲ್ಲಿ ಸುರಹೊನ್ನೆ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, 1996ರಲ್ಲಿ ಮಾಧ್ಯಮ ಅಕಾಡೆಮಿಯ ವಿಶೇಷ ಪ್ರಶಸ್ತಿಗಳು ಎಚ್ಚೆಸ್ಕೆಯವರಿಗೆ ಸಂದಿವೆ. ಅವರ ಅಭಿಮಾನಿಗಳು ಅವರಿಗೆ" ಸಮದರ್ಶಿ" ಎಂಬ ಅಭಿನಂದನಾ ಗ್ರಂಥವನ್ನು ಪ್ರಕಟಿಸಿ ಪುರಸ್ಕರಿಸಿದ್ದಾರೆ.

ಎಚ್ಚೆಸ್ಕೆ ಮೈಸೂರಿನಲ್ಲಿ ನೆಲಸಿ ಸೃಜನಶೀಲ ಬರೆಹಗಳಲ್ಲಿ ತೊಡಗಿಕೊಂಡಿದ್ದಾರೆ.
(ಜಿ.ಎನ್.ಎನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ